Friday, August 16, 2024

ದೇವರ ಮನೆ

ಎನ್ನ ಮನೆಯೊಳಗೊಂದು ಮನೆಯ ಮಾಡಿತ್ತು ಇರುವೆಗಳು,

ಇರುವೆಗಳ ಪಾಲಿಗೆ ಎನ್ನ ಮನೆಯೇ ಪ್ರಪಂಚ, ನಾನೆ ದೇವರು,

ಇರುವೆಗಳು ತನ್ನ ವಾಸಕ್ಕೆ ಎನ್ನ ನಿವಾಸವ ಸಡಿಲಗೊಳಿಸುತ್ತಿತ್ತು,

ಕಂಡು ಕೆಂಡಾಮಂಡಲನಾಗಿ ಸಿಂಪಡಿಸಿದೆ ಕೀಟ ನಾಶಕ,

ನರಳಿ ನಶಿಸಿತು ಇರುವೆಗಳ ಪ್ರಪಂಚ,

ನಂತರ ಯೋಚಿಸಿದೆ, ನಾವು ಮನುಜರೆಂಬ ಇರುವೆಗಳು,

ದೇವರ ಪ್ರಪಂಚದಲ್ಲಿ ಮನೆಯ ಮಾಡಿರುವ ಇರುವೆಗಳು,

ದೇವರ ಮನೆಯ ಸಡಿಲಗೊಳಿಸುತ್ತಿರುವ ಇರುವೆಗಳು,

ದೇವರ ಕೆಂಗಣ್ಣು ಮನುಕುಲದ ಮೇಲೆ ಬೀಳುವುದೇ?

ದೇವ ತನ್ನ ಮನೆಯ ಉಳಿವಿಗೆ, ಕೀಟ ನಾಶಕ ಸಿಂಪಡಿಸಬಹುದೇ??


ಕಲ್ಪನೆ : ಫಣಿ

Friday, March 8, 2024

ನೀರುಣಿಸು

 ನೀರುಣಿಸು ದೇವ ನೀರುಣಿಸು

ಯಾವ ದೊರೆಯ ತಪ್ಪೇನಿದ್ದರು ಮನ್ನಿಸಿ, ನೀರುಣಿಸು

ನಮ್ಮ ನಿಸರ್ಗದ ನಿರ್ಲಕ್ಷವ ಮನ್ನಿಸಿ, ನೀರುಣಿಸು

ಕೋಟಿ ಜೀವರಾಶಿಗಳ ಕೋರಿಕೆ ದೇವ, ನೀರುಣಿಸು.


ಧರ್ಮ ಶ್ರದ್ಧೆ ಮರೆತಿಹ ನಮ್ಮ ಕ್ಷಮಿಸಿ, ನೀರುಣಿಸು

ಮಾನವೀಯತೆ ಮರೆತಿಹ ನಮ್ಮ ಮನ್ನಿಸಿ, ನೀರುಣಿಸು

ಮೋಹದ ಮೋಡಿಗೆ ಜೋಡಿಯಾದ ನಮ್ಮನು ಮನ್ನಿಸಿ, ನೀರುಣಿಸು

ಸಂಕಟ ಬಂದಿದೆ ವೆಂಕಟರಮಣ, ನೀರುಣಿಸು..


ನೀರಿದ್ದ ಕಾಲದಲಿ ಬೆಲೆ ಕೊಡದ ನಮ್ಮ ಕ್ಷಮಿಸಿ, ನೀರುಣಿಸು

ಚುಚ್ಚು ಮಾತಲ್ಲಿ ಕಣ್ಣೀರು ಬರೆಸುವ ನಮ್ಮ ಮನ್ನಿಸಿ, ನೀರುಣಿಸು

ಒಬ್ಬರ ಕಾಲೆಳೆದು ತಾ ಮುಂದೋಡುವ ನಮ್ಮ ಕ್ಷಮಿಸಿ, ನೀರುಣಿಸು

ಚಿರ ಋಣಿ ನಾವಾಗುವೆವು ದೇವ, ಕರುಣಿಸು ನೀರುಣಿಸು


ರಚನೆ,

ಫಣಿ